Monday, May 9, 2011

ನಗು, ನೀನಗು, ಎದ್ದಿದ್ದೆ ಮೊದಲು ನಗು !!! :)


ಆ ದಿನ ಯುಗಾದಿ, ಬೆಳಿಗ್ಗೆ 8.೦೦ ಗಂಟೆ, ಎದ್ದು ನೋಡ್ತಿನಿ ಮನೆ ಕೆಲಸದವಳು ಚಕ್ಕರ್ ಹಾಕಿದಾಳೆ. ಎಲ್ಲ ಪಾತ್ರೆಗಳು ಹಾಗೆ ಇವೆ ಎರಡು ದಿನದ್ದು , ತಿಂಡಿ ಮಾಡಿಕೊಂಡು ತಿನ್ನೋಕು ಪಾತ್ರೆ ಇಲ್ಲ. ಪಕ್ಕದಮನೆಲಿ ಎಲ್ಲ ಒಳ್ಳೆ ಹಬ್ಬ ಸಂಬ್ರಮ, ಹೊಸ ವರ್ಷ, ನಮ್ಮನೇಲಿ !!? ತುಂಬಾ ಸಿಟ್ಟು ಬಂತು ಕೆಲಸದವಳ ಮೇಲೆ .

ಫುಲ್ ಮೂಡ ಆಫ ಆಯಿತು!!!

ಸೀದಾ ಆಫೀಸ್ ಗೆ ಬಂದೆ , ಮೂಡ ಆಫ ಆಗಿದೆ ಕೆಲಸ ಹೇಗೆ ಮಾಡೋದು?!, ಸುಮ್ನೆ ಹೇಗೋ ಟೈಂಪಾಸ್ ಮಾಡಿ ಮನೆಗೆ ಹೋದೆ . ಅತ್ತಿಗೆ ಬಂದಿದ್ರು ಹಬ್ಬದ ಹೋಳಿಗೆ ಎಲ್ಲ ತಗೊಂಡು , ಏನು ಮಾಡಿಲ್ಲ ನಾನು ಮನೇಲಿ, ಸುಸ್ತು ಬೇರೆ ಆಗಿತು, ಬೆಂಗಳೂರು ಟ್ರಾಫಿಕ್ ನಲ್ಲಿ ಆಫೀಸ್ ಹೋಗಿ ಬರೋದೆ ದೊಡ್ಡ ಕೆಲಸ. ಸರೀ ಅಂತ , ಹೊರಗಡೆ ಹೋದ್ವಿ. ಮೂಡ ಇಲ್ಲ .. ಹಾಗೆ ಮಾತಾಡ್ತಾ ಹೇಳ್ದೆ ಮೂಡ ಆಫ , ಈ ದಿನ ಚೆನ್ನಾಗಿರಲಿಲ್ಲ ನಂಗೆ ಅಂತ! ಆಗ ನನ್ನ ಅತ್ತಿಗೆ ಗಂಡ ತಮಾಷೆಗೆ ಅಂದ್ರು ,ಅದಕ್ಕೆ ಎದ್ದಿದೆ ಒಂದು ಸಲ ಫುಲ್ ನಕ್ಕೊಂಡೆ ಬಿಡಬೇಕು. ಎಲ್ಲರು ಬಿದ್ದು ಬಿದ್ದು ನಕ್ವಿ ಆ ಮಾತಿಗೆ "ಸುಮ್ನೆ ನಕ್ಕಿದ್ರೆ ಹುಚ್ರು ಅಂತಾರೆ" ಅದೂ ಬೆಳಿಗ್ಗೆ ಬೆಳಿಗ್ಗೆ , ಅಂತ!

ಅವತ್ತಿಂದ ನನ್ನ ತಮ್ಮ ಬೆಳಿಗ್ಗೆ ಎದ್ದಿದ್ದೆ "ನಾನು ನಕ್ಕೊಂಡು ಬಿಡ್ತ್ಹಿನಪ್ಪ" ಅಂತ ಹೇಳಿ ತಮಾಷೆಗೆ ನಗೋಕೆ ಶುರು ಮಾಡಿದ..ನಾನು ಜೊತೆಗೆ ನಗ್ತಿದ್ದೆ , ಹಾಗೆ ಒಂದು ವಾರ ಆಯಿತು ನಗೋದು. ಒಂದು ವಾರದ ಮೇಲೆ ಅದ್ರ ಈಫೆಕ್ಟು ಗೊತಾಯ್ತು , ಮೂಡ ಆಫ ಆಗೋದು ಕಡಿಮೆ ಆಗಿದೆ.

ಟ್ರೈ ಮಾಡಿ ನೋಡಿ ನೀವೂನು. ಭಯ ಪಡಬೇಡಿ, ಯಾರು ಹುಚ್ರು ಅಂತ ಹೇಳಲ್ಲ! ಸುಮ್ನೆ ನಗೋದಕ್ಕೂ ಕಾರಣ ಇದೆ ಇಲ್ಲಿ!

Sunday, August 1, 2010

ಸಂತೋಷ!!


ಕಿಟಕಿ ಸೀಟಲ್ಲಿ
ಒಬ್ಬನೇ ಕುಳಿತು,
ಕಲ್ಪನೆಯ ಲೋಕದಲ್ಲಿ
ವಿಹರಿಸುವುದರಲ್ಲಡಗಿದೆ!

ಮನೆಯಲ್ಲಿ ಬೈಯಿಸಿಕೊಂಡು
ಕಾಣಿಸದೆ ಕದ್ದುಮುಚ್ಚಿ,
ಬೀದಿಯಲ್ಲಿ ಪಾನಿಪುರಿ
ತಿನ್ನುವುದರಲ್ಲಡಗಿದೆ!

ಬೇಗ ಏಳಿಸಿದಾಗ
ಮತ್ತೆ ಮಲಗಬೇಕೆಂದಿನಿಸಿ,
ನೀರು ಕಾದಿಲ್ಲವೆಂದು
ನೆಪಹೇಳುವುದರಲ್ಲಡಗಿದೆ!

ಎಲ್ಲ ಚಹ ಕುಡಿಯುತ್ತಿರೆ,
ಬೇಗ ತಾ ಮುಗಿಸಿ,
ನಾ ಮೊದಲು
ಎನ್ನುವುದರಲ್ಲಡಗಿದೆ!

ಪ್ರಿಯತಮೆಯು ಪಕ್ಕಕ್ಕಿರೆ
ಬೀದಿಯಲ್ಲಿ ಹೋಗುವ,
ಹುಡುಗಿಯರ ಗಮನ
ತನ್ನದಾಗಿಸುವುದರಲ್ಲಡಗಿದೆ!

Saturday, July 31, 2010

ನಿನ್ನೆ!!


ಹರಿದು ಹೊಳೆಯಾಗಿ,
ಕರಗಿ ಮಣ್ಣಲ್ಲಿ ಕೊಳೆಯಾಗಿ,
ಕೆದಕಿ ಭಾವಗಳ ಕಹಿಯಾಗಿ,
ಕೂತಿಹುದು ಮನದಲ್ಲಿ ನೆನಪಾಗಿ!

ಮಾತು ಮೌನವಾಗಿ,
ಹೃದಯ ಕಲ್ಲಾಗಿ,
ಕೊರಗಿ ಕೊನೆಯಾಗಿ,
ಕಲೆತಿಹುದು ಕಣ್ಣಲ್ಲಿ ಕಂಬನಿಯಾಗಿ!

ನಗೆಯು ಹೊಗೆಯಾಗಿ,
ಪ್ರೀತಿ ನೋವಲ್ಲಿ ಸೆರೆಯಾಗಿ,
ಭಾರವಾದ ಅಲೆಯಾಗಿ,
ಅಪ್ಪಳಿಸುತಿಹುದು ಎದೆಯನ್ನು ಮಿಡಿತವಾಗಿ!

ನಿರಂತರ!!


ಕಾರ್ಮೋಡದ ಸಾಲೊಂದು,
ವರುಣಧಾರೆಯ ಜೊತೆ,
ಕವಿಯ ಸೇರಲು ಆಶಿಸುತಿರೆ,
ತಂಗಾಳಿ ತಾ ಅದ ಕಡಲತೀರಕ್ಕೊಯ್ದು,
ಮುತ್ತಾಗಿಸುವೆನೆಂಬ ಭರವಸೆಯಿತ್ತಿತು!

ಕೊನೆಗೆ ಮಳೆಯೊಳಗೊಂದು,
ಸಾಮಾನ್ಯ ಹನಿಗಳ ಜೊತೆ,
ಕಡಲ ಸೇರಿ ನಿರಾಶೆಯಾಗುತಿರೆ,
ಬಿಸಿಲ ಬೇಗೆಯು ಮತ್ತೊಮ್ಮೆ ತಾ ಆಗಸಕ್ಕೊಯ್ದು,
ಕವಿತೆಯಸಾಲಾಗಿಸುವೆನೆಂಬ ಪಣತೊಟ್ಟಿತು!

Monday, April 26, 2010

ಕನ್ನಡಿಯ ಸುಂದರಿ!!!


ಕನ್ನಡಿಯ ಸುಂದರಿಯೆ
ನಿನ್ನ ವರ್ಣಿಸುವ ಕವಿಯಾರೆ?
ಕಲ್ಪನೆಯ ಕುಂಚದಲ್ಲಾದರೂ
ಚಿತ್ರಿಸಬಲ್ಲನೇ ಆ ಕಲಾಕಾರ!!

ನೋಟದಲ್ಲೊಂದು ನವಿರು,
ಮಾತಿನಲ್ಲಿ ಮಂದಹಾಸ,
ಮೌನದಲ್ಲೊಂದು ನಗೆಯ ಮಿಂಚಿನಿಟ್ಟು,
ಮನದಾಳವನ್ನೇ ಸೂರೆಗೊಂಡೆ!!

Tuesday, November 24, 2009

ಭಾವಾತಂಕ !!

ಮುಂಜಾವ ಮಂಜಿನಲಿ ಮಿಂದ,
ಬೆಂಗಾಡ ಬಿಸಿಲಿನಲಿ ಬೆಂದ,
ಸಂಜೆಯಾ ತಂಪಿನಲಿ ತೇಲಿರುವ ಭಾವಗಳೆ..
ಕಾಡದಿರಿ,ಬಾಡದಿರಿ, ರಾತ್ರಿಯಾಗಿಹುದೆಂದು.

ಮುಗ್ದತೆಯ ಮನಸಿನಲಿ ಮೂಡಿರುವ ನೀವು,
ದಗ್ದತೆಯ ಆಳವನು ಕೆದಕದಿರಿ ಇಂದು,
ಭಾಂದವ್ಯದ ಹೆಸರಿನಲಿ ಬಂದಿಸಿದ ಮನವೇ..
ತಣಿಸುವುದು ನಿಮ್ಮನ್ನು ಒಲವ ಧಾರೆಯ ಸುರಿದು.

ಹೊದೆಯಿರಿ ಬೆಚ್ಚನೆಯ ಭರವಸೆಯ ಹೊದಿಕೆ,
ಬೇಡ ನಿಮಗೆ ಇಂದೇ ಎಲ್ಲಾ ಸಾಧಿಸುವ ಬಯಕೆ,
ನಗುತಿಹನು ಚಂದ್ರಮನು..ನೋಡಿ ನಿಮ್ಮ ಅಸಹಾಯಕತೆ..
ಮಲಗಿ ಸುಮ್ಮನೆ,ಇರಲಿ ನಿಮ್ಮೊಳಗೆ ಆ ನಾಳೆಯಾಗುವದೆಂಬ ನಂಬಿಕೆ.

ನಿದ್ರೆ !!

ಭುವಿಯ ಹಾಸಿಗೆ, ಮುಗಿಲ ಚಾದರ..
ಹಳೆಯ ನೆನಪು, ಹೊಸ ಕಲ್ಪನೆ..
ಮುದ್ದಾದ ಕನಸು,ಮರೆಯಲಾಗದ ಘಟನೆ..
~~~~~~~~~~~~~~~~~~~~
ಇದೆಲ್ಲದರ ನಡುವೆ ನನ್ನ ನಿದ್ರೆ. J