Sunday, August 1, 2010

ಸಂತೋಷ!!


ಕಿಟಕಿ ಸೀಟಲ್ಲಿ
ಒಬ್ಬನೇ ಕುಳಿತು,
ಕಲ್ಪನೆಯ ಲೋಕದಲ್ಲಿ
ವಿಹರಿಸುವುದರಲ್ಲಡಗಿದೆ!

ಮನೆಯಲ್ಲಿ ಬೈಯಿಸಿಕೊಂಡು
ಕಾಣಿಸದೆ ಕದ್ದುಮುಚ್ಚಿ,
ಬೀದಿಯಲ್ಲಿ ಪಾನಿಪುರಿ
ತಿನ್ನುವುದರಲ್ಲಡಗಿದೆ!

ಬೇಗ ಏಳಿಸಿದಾಗ
ಮತ್ತೆ ಮಲಗಬೇಕೆಂದಿನಿಸಿ,
ನೀರು ಕಾದಿಲ್ಲವೆಂದು
ನೆಪಹೇಳುವುದರಲ್ಲಡಗಿದೆ!

ಎಲ್ಲ ಚಹ ಕುಡಿಯುತ್ತಿರೆ,
ಬೇಗ ತಾ ಮುಗಿಸಿ,
ನಾ ಮೊದಲು
ಎನ್ನುವುದರಲ್ಲಡಗಿದೆ!

ಪ್ರಿಯತಮೆಯು ಪಕ್ಕಕ್ಕಿರೆ
ಬೀದಿಯಲ್ಲಿ ಹೋಗುವ,
ಹುಡುಗಿಯರ ಗಮನ
ತನ್ನದಾಗಿಸುವುದರಲ್ಲಡಗಿದೆ!

Saturday, July 31, 2010

ನಿನ್ನೆ!!


ಹರಿದು ಹೊಳೆಯಾಗಿ,
ಕರಗಿ ಮಣ್ಣಲ್ಲಿ ಕೊಳೆಯಾಗಿ,
ಕೆದಕಿ ಭಾವಗಳ ಕಹಿಯಾಗಿ,
ಕೂತಿಹುದು ಮನದಲ್ಲಿ ನೆನಪಾಗಿ!

ಮಾತು ಮೌನವಾಗಿ,
ಹೃದಯ ಕಲ್ಲಾಗಿ,
ಕೊರಗಿ ಕೊನೆಯಾಗಿ,
ಕಲೆತಿಹುದು ಕಣ್ಣಲ್ಲಿ ಕಂಬನಿಯಾಗಿ!

ನಗೆಯು ಹೊಗೆಯಾಗಿ,
ಪ್ರೀತಿ ನೋವಲ್ಲಿ ಸೆರೆಯಾಗಿ,
ಭಾರವಾದ ಅಲೆಯಾಗಿ,
ಅಪ್ಪಳಿಸುತಿಹುದು ಎದೆಯನ್ನು ಮಿಡಿತವಾಗಿ!

ನಿರಂತರ!!


ಕಾರ್ಮೋಡದ ಸಾಲೊಂದು,
ವರುಣಧಾರೆಯ ಜೊತೆ,
ಕವಿಯ ಸೇರಲು ಆಶಿಸುತಿರೆ,
ತಂಗಾಳಿ ತಾ ಅದ ಕಡಲತೀರಕ್ಕೊಯ್ದು,
ಮುತ್ತಾಗಿಸುವೆನೆಂಬ ಭರವಸೆಯಿತ್ತಿತು!

ಕೊನೆಗೆ ಮಳೆಯೊಳಗೊಂದು,
ಸಾಮಾನ್ಯ ಹನಿಗಳ ಜೊತೆ,
ಕಡಲ ಸೇರಿ ನಿರಾಶೆಯಾಗುತಿರೆ,
ಬಿಸಿಲ ಬೇಗೆಯು ಮತ್ತೊಮ್ಮೆ ತಾ ಆಗಸಕ್ಕೊಯ್ದು,
ಕವಿತೆಯಸಾಲಾಗಿಸುವೆನೆಂಬ ಪಣತೊಟ್ಟಿತು!

Monday, April 26, 2010

ಕನ್ನಡಿಯ ಸುಂದರಿ!!!


ಕನ್ನಡಿಯ ಸುಂದರಿಯೆ
ನಿನ್ನ ವರ್ಣಿಸುವ ಕವಿಯಾರೆ?
ಕಲ್ಪನೆಯ ಕುಂಚದಲ್ಲಾದರೂ
ಚಿತ್ರಿಸಬಲ್ಲನೇ ಆ ಕಲಾಕಾರ!!

ನೋಟದಲ್ಲೊಂದು ನವಿರು,
ಮಾತಿನಲ್ಲಿ ಮಂದಹಾಸ,
ಮೌನದಲ್ಲೊಂದು ನಗೆಯ ಮಿಂಚಿನಿಟ್ಟು,
ಮನದಾಳವನ್ನೇ ಸೂರೆಗೊಂಡೆ!!