Saturday, July 31, 2010

ನಿನ್ನೆ!!


ಹರಿದು ಹೊಳೆಯಾಗಿ,
ಕರಗಿ ಮಣ್ಣಲ್ಲಿ ಕೊಳೆಯಾಗಿ,
ಕೆದಕಿ ಭಾವಗಳ ಕಹಿಯಾಗಿ,
ಕೂತಿಹುದು ಮನದಲ್ಲಿ ನೆನಪಾಗಿ!

ಮಾತು ಮೌನವಾಗಿ,
ಹೃದಯ ಕಲ್ಲಾಗಿ,
ಕೊರಗಿ ಕೊನೆಯಾಗಿ,
ಕಲೆತಿಹುದು ಕಣ್ಣಲ್ಲಿ ಕಂಬನಿಯಾಗಿ!

ನಗೆಯು ಹೊಗೆಯಾಗಿ,
ಪ್ರೀತಿ ನೋವಲ್ಲಿ ಸೆರೆಯಾಗಿ,
ಭಾರವಾದ ಅಲೆಯಾಗಿ,
ಅಪ್ಪಳಿಸುತಿಹುದು ಎದೆಯನ್ನು ಮಿಡಿತವಾಗಿ!

ನಿರಂತರ!!


ಕಾರ್ಮೋಡದ ಸಾಲೊಂದು,
ವರುಣಧಾರೆಯ ಜೊತೆ,
ಕವಿಯ ಸೇರಲು ಆಶಿಸುತಿರೆ,
ತಂಗಾಳಿ ತಾ ಅದ ಕಡಲತೀರಕ್ಕೊಯ್ದು,
ಮುತ್ತಾಗಿಸುವೆನೆಂಬ ಭರವಸೆಯಿತ್ತಿತು!

ಕೊನೆಗೆ ಮಳೆಯೊಳಗೊಂದು,
ಸಾಮಾನ್ಯ ಹನಿಗಳ ಜೊತೆ,
ಕಡಲ ಸೇರಿ ನಿರಾಶೆಯಾಗುತಿರೆ,
ಬಿಸಿಲ ಬೇಗೆಯು ಮತ್ತೊಮ್ಮೆ ತಾ ಆಗಸಕ್ಕೊಯ್ದು,
ಕವಿತೆಯಸಾಲಾಗಿಸುವೆನೆಂಬ ಪಣತೊಟ್ಟಿತು!